ಕನ್ನಡ ಕೇಸರಿ : ಧಾರವಾಡದಲ್ಲಿ ಬಿಂದೂರಾವ್ ಮುತಾಲಿಕ ದೇಸಾಯಿ ಎಂಬವರು 1902ರಲ್ಲಿ ಪ್ರಾರಂಭಿಸಿದ ಒಂದು ಪತ್ರಿಕೆ. ಇದು ಲೋಕ ಮಾನ್ಯ ತಿಲಕರ ಪ್ರಸಿದ್ಧ ಮರಾಠಿ ಪತ್ರಿಕೆ ಕೇಸರಿಯ ಕನ್ನಡ ಅವತರಣ. ಬಂಗಾಳ ವಿಭಜನೆಯಂಥ ಘಟನೆಗಳು ಮತ್ತು ಮಹಾರಾಷ್ಟ್ರದಲ್ಲಿ ತಿಲಕರು ಪಾರ್ರಂಭಿಸಿದ ರಾಷ್ಟ್ರೀಯ ಆಂದೋಳನಗಳ ಪ್ರಭಾವ ಉತ್ತರ ಕರ್ನಾಟಕದಲ್ಲಿ ಎಷ್ಟು ತೀವ್ರವಾಗಿತ್ತೆನ್ನುವುದಕ್ಕೆ ಕನ್ನಡ ಕೇಸರಿಯಂಥ ಪತ್ರಿಕೆಗಳ ಉಗಮ ಪ್ರಬಲ ನಿದರ್ಶನವಾಗಿದೆ.

ಪ್ರತಿವಾರವೂ ಮರಾಠಿ ಕೇಸರಿಯ ಲೇಖನಗಳನ್ನು ಕನ್ನಡದಲ್ಲಿ ಅನುವಾದಿಸಿ ಕನ್ನಡ ಕೇಸರಿಯಲ್ಲಿ ಪ್ರಕಟಿಸಲಾಗುತ್ತಿತ್ತು. ಪತ್ರಿಕೆಯ ಮುದ್ರಣದ ಕಾರ್ಯ ನಡೆಯುತ್ತಿದ್ದುದು ಹುಬ್ಬಳಿಯಲ್ಲಿ. ಸತ್ಯಾಗ್ರಹ ಯೋಧ ಹಾಗೂ ಸೇವಾದಳದ ಸಂಸ್ಥಾಪಕರಾದ ನಾ. ಸು. ಹರ್ಡೀಕರ್ ಅವರು ಈ ಕಾರ್ಯದಲ್ಲಿ ನೆರವಾಗಲು ಮುಂದಾದರು. ಮುದ್ರಣದ ಮೇಲ್ವಿಚಾರಣೆಯ ಜೊತೆಗೆ ಅವರು ಮರಾಠಿಯ ಮೂಲ ಲೇಖನಗಳ ಕನ್ನಡ ಅನುವಾದ ಕಾರ್ಯವನ್ನೂ ನೆರವೇರಿಸುತ್ತಿದ್ದರು. ಲೇಖನಗಳ ಜೊತೆಗೆ ಹಲವಾರು ಸಾಂದರ್ಭಿಕ ಚಿತ್ರಗಳನ್ನೂ ಪ್ರಕಟಿಸಲಾಗಿತ್ತು. ಇಂದು ಸಂದರ್ಭದಲ್ಲಿ ಹರ್ಡೀಕರರು ಬರೆದ ಟಿಪ್ಪಣಿಯ ಭಾಷೆ ಎಷ್ಟು ತೀಕ್ಷ್ಣವಾಗಿತ್ತೆಂದರೆ ಸಂಪಾದಕರಾದ ಬಿಂದೂರಾಯರು ಕೊನೆಗಳಿಗೆಯಲ್ಲಿ ಅದನ್ನು ಗಮನಿಸಿ ಅಂಚೆಗೆ ಹೋದ ಪತ್ರಿಕೆಯನ್ನು ಮರಳಿ ತರಿಸಿಕೊಂಡು ಹರ್ಡೀಕರರ ಮಾತಿನ ಬಿಸಿಯನ್ನು ತಗ್ಗಿಸಿ ಬೇರೆ ಬೇರೆ ಟಿಪ್ಪಣಿ ಬರೆದರು. ಇಲ್ಲವಾದರೆ ಪತ್ರಿಕೆಗೆ ದುರ್ಭರವಾದ ಪ್ರಸಂಗವೊದಗುತ್ತಿತ್ತು. ಲೋಕಮಾನ್ಯ ತಿಲಕರ ವಿಚಾರಗಳನ್ನೂ ರಾಷ್ಷ್ರೀಯ ಹೋರಾಟದ ಸ್ವರೂಪವನ್ನೂ ಜನತೆಗೆ ತಿಳಿಸುವಲ್ಲಿ ಯಶಸ್ವಿಯಾದ ಈ ಪತ್ರಿಕೆ ಆಕಾಲದಲ್ಲಿ ತುಂಬ ಜನಪ್ರಿಯವಾಗಿತ್ತು.                                           (ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ